ಕಳ್ಳಿಪೀರ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಸಮಶೀತೋಷ್ಣವಲಯ ಹಾಗೂ ಉಷ್ಣವಲುಗಳಲ್ಲಿ ವಾಸಿಸುವ ಒಂದು ಜಾತಿಯ ಹಕ್ಕಿ (ಬೀ ಈಟರ್). ಬಲು ಸುಂದರವಾದ ಮತ್ತು ವರ್ಣವೈವಿಧ್ಯವುಳ್ಳ ಈ ಹಕ್ಕಿ ಮಿಂಚುಳ್ಳಿಗಳಿಗೆ (ಕಿಂಗ್ ಫಿಶರ್) ಹತ್ತಿರ ಸಂಬಂಧಿ. ಕೊರಾಸೈಯಿಪಾರ್ಮೀ¸óï ಗಣದ ಮೆರಾಪಿಡೀ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ ಹಲವಾರು ಜಾತಿಗಳಿದ್ದು ಇವುಗಳಲ್ಲಿ ಮೆರಾಪ್ಸ್ ಜಾತಿಯವು ಮುಖ್ಯವಾದವು.  ಪ್ರಭೇದಗಳು 24. ಎಲ್ಲಕ್ಕೂ ಬೀ ಈಟರ್ ಎಂಬ ಸಾಮಾನ್ಯ ಹೆಸರೇ ಇದೆ.  ಆಫ್ರಿಕ, ಆಸ್ಟ್ರೇಲಿಯ, ಮಡಗಾಸ್ಕರ್ ಮತ್ತು ಭಾರತದಲ್ಲಿ ಇವು ಸಾಮಾನ್ಯ.

 ಬಗೆಬಗೆಯ ಕೀಟಗಳು ಇದರ ಆಹಾರವಾದರೂ ಜೇನುನೊಣವೆಂದರೆ ಬಲು ಇಷ್ಟ. ಅದರಿಂದಲೇ ಇದಕ್ಕೆ ಬೀ ಈಟರ್ ಎಂಬ ಹೆಸರು ಬಂದಿರುವುದು. ಭಾರತದಲ್ಲಿ ಐದು ಪ್ರಭೇದಗಳಿಗೆ ಸೇರಿರುವ ಹಕ್ಕಿಗಳಿವೆ - ನೀಲಿ ಬಾಲದ ಕಳ್ಳಪೀರ (ಮೆರಾಪ್ಸ್ ಪೆರ್‍ಸಿಕಸ್) ಮತ್ತು ಹಸಿರು ಬಣ್ಣದ ಕಳ್ಳಿಪೀರ (ಮೆರಾಪ್ಸ್ ಓರಿಯಂಟ್ಯಾಲಿಸ್). ಮೆ. ಎಪಿಯಾಸ್ಟರ್, ಮೆ. ಲೆಶ್ಚಿನಾಲ್‍ಟಿ, ಮೆ.ಫಿóಲಿಪಿನಸ್

 ಹಸಿರು ಬಣ್ಣದ ಕಳ್ಳಿಪೀರ ಸಾಧಾರಣವಾಗಿ ಗುಬ್ಬಚ್ಚಿಯಷ್ಟಿದೆ. ಭಾರತದ ಹಿಮಾಲಯ ಪರ್ವತದ 5,000' ಎತ್ತರದಿಂದ ಹಿಡಿದು ಕನ್ಯಾಕುಮಾರಿಯ ತನಕ ಎಲ್ಲ ಕಡೆಗಳಲ್ಲಿಯೂ ಸಾಮಾನ್ಯವಾಗಿ ಕಾಣಬರುವ ಹಕ್ಕಿಯಿದು. ದೇಹ ತೆಳುವಾಗಿ ಸುಮಾರು 6" ಉದ್ದವಿದೆ. ದೇಹದ ಬಣ್ಣ ಕಾಂತಿಯುಕ್ತವಾದ ಹಸಿರು. ತಲೆ ಮತ್ತು ಕತ್ತಿನಲ್ಲಿ ಕೆಂಪುಮಿಶ್ರಿತ ಕಂದುಬಣ್ಣದ ಛಾಯೆಗಳಿವೆ. ಕುತ್ತಿಗೆಯ ಹತ್ತಿರ ಸ್ಪಷ್ಟವಾದ ಕಪ್ಪು ಬಣ್ಣದ ಕಂಠಹಾರದಂತೆ ಕಾಣುವ ಗುರುತಿದೆ. ಗಂಡು ಮತ್ತು ಹೆಣ್ಣು ಹಕ್ಕಿಗಳ ಬಾಹ್ಯ ಲಕ್ಷಣಗಳಲ್ಲಿ ಯಾವ ರೀತಿಯ ವ್ಯತ್ಯಾಸವೂ ಇಲ್ಲ. ಈ ಹಕ್ಕಿ ಜೋಡಿಜೋಡಿಯಾಗಿಯೋ, ಗುಂಪಾಗಿಯೋ ದೂರವಾಣಿ ತಂತಿಗಳ ಮೇಲೆ ಕುಳಿತಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಇದರ ಕೊಕ್ಕು ನೀಳವಾಗಿ, ತೆಳುವಾಗಿ ಸ್ವಲ್ಪ ಬಾಗಿದೆ. ರೆಕ್ಕೆಗಳು ಸಣ್ಣವು; ದುಂಡಾಗಿವೆ. ಬಾಲದಲ್ಲಿ 12 ಗರಿಗಳಿವೆ. ಇವುಗಳಲ್ಲಿ ಮಧ್ಯದ ಗರಿಗಳು ಮೊಟಕಾದ ಸೂಜಿಗಳಂತಿವೆ. ಈ ಹಕ್ಕಿ ಬಹಳ ಚುರುಕಾಗಿ ಹಾರಾಡಬಲ್ಲುದು. ಹಾರುತ್ತಿರುವಾಗ ಇದರ ದೇಹದ ವಿವಿಧ ಬಣ್ಣಗಳು ಬಹಳ ಚೆನ್ನಾಗಿ ಕಾಣುತ್ತವೆ. ಅಲ್ಲದೆ ತನ್ನ ಕೊಕ್ಕನ್ನು ಕಟಕಟನೆ ಕಡಿಯುತ್ತಿರುತ್ತದೆ. ಒಣಗಿದ ರೆಂಬೆಗಳು, ಉದ್ದವಾದ ಕಂಬಗಳ ಮೇಲೆ ಕುಳಿತಿದ್ದು ಅಂತರಿಕ್ಷದಲ್ಲಿ ಹಾರುತ್ತಿರುವ ಕೀಟಗಳನ್ನು ಫಕ್ಕನೆ ಹಾರಿ ಹಿಡಿದು ತನ್ನ ರೆಕ್ಕೆಗಳನ್ನು ಚಲಿಸದಂತೆ ಹರಡಿ ಹಾಗೆಯೇ ಹಿಂದಕ್ಕೆ ತಿರುಗಿಕೊಂಡು ತನ್ನ ಮೊದಲಿನ ಸ್ಥಾನಕ್ಕೆ ಬಂದು ಸೇರುತ್ತದೆ. ಅನಂತರ ಕೀಟವನ್ನು ಕೊಂಬೆಯ ಮೇಲಿಟ್ಟು ಕುಕ್ಕಿ ನುಂಗುತ್ತದೆ. ಈ ಷಿಕಾರಿಯ ಕ್ರಮ ನೋಡಲು ಬಹಳ ರಮ್ಯ. ದನಕರುಗಳ ಮೈಮೇಲಿನ ಕೀಟ ಮತ್ತು ಉಣ್ಣಿಗಳನ್ನು ತಿನ್ನುವುದೂ ಉಂಟು. ಮಧ್ಯಾಹ್ನದ ಹೊತ್ತಿನಲ್ಲಿ ಎಲೆಗಳ ಮರೆಯಲ್ಲಿ ವಿಶ್ರಮಿಸುತ್ತದೆ. ಕೆಲವು ಸಾರಿ ಮಣ್ಣಿನಲ್ಲಿ ಹೊರಳಾಡಿ ದೇಹವನ್ನು ಧೂಳಿನಿಂದ ತುಂಬಿಸಿಕೊಳ್ಳುತ್ತದೆ. ಮನುಷ್ಯನನ್ನು ಕಂಡರೆ ನಾಚಿಕೆಯಾಗಲಿ ಭಯವಾಗಲಿ ಇಲ್ಲ. ಸಾಧಾರಣವಾಗಿ ಸದ್ದು ಗದ್ದಲ ಮಾಡದ ಹಕ್ಕಿಯಾದರೂ ಕೆಲವೊಮ್ಮೆ ಇಂಪಾಗಿ ಟಿಟ್ ಟಿಟ್ ಎಂದು ಶಬ್ದ ಮಾಡುತ್ತದೆ. ರಾತ್ರಿಯನ್ನು ದೊಡ್ಡ ಮರಗಳ ರೆಂಬೆಯಲ್ಲಿ ಹುದುಗಿ ಮಲಗಿದ್ದು ಕಳೆಯುತ್ತದೆ. ಆಗಿಂದಾಗ್ಗೆ ಇಡಿ ಗುಂಪು ಗಾಬರಿಪಟ್ಟಂತೆ ಹೆಚ್ಚು ಉದ್ರೇಕಿತವಾದ ಟ್ರಿ ಟ್ರಿ ಎಂಬ ಶಬ್ದವನ್ನು ಮಾಡುತ್ತ ತಾವು ವಾಸವಾಗಿರುವ ಮರಗಳನ್ನು ಸುತ್ತಿ ಸುತ್ತಿ ಬಂದು ಅನಂತರ ನಿಧಾನವಾಗಿ ಅದೇ ಮರಗಳಲ್ಲಿ ನಿಶ್ಯಬ್ಧವಾಗಿ ಅಡಗಿಕೊಳ್ಳುತ್ತವೆ.

 ಈ ಹಕ್ಕಿಯ ಸಂತಾನೋತ್ಪತ್ತಿಯ ಕಾಲ ಫೆಬ್ರವರಿಯಿಂದ ಮೇ ವರೆಗೆ. ಸಾಧಾರಣವಾಗಿ ಗುಂಪು ಗುಂಪಾಗಿ ಸೇರಿಕೊಂಡು ನದಿಯ ದಡಗಳಲ್ಲಿ ಗೂಡುಗಳನ್ನು ನಿರ್ಮಿಸುತ್ತವೆ. ಗೂಡು ಕಟ್ಟುವ ಕ್ರಮ ವೈಶಿಷ್ಟ್ಯಪೂರ್ಣವಾದುದು. ಮೊದಲು ತನ್ನ ಅರ್ಧ ತೆರೆದ ಕೊಕ್ಕಿನಿಂದ ಗೋಡೆಯ ಸುಮಾರು 25-30 ಸೆಂ.ಮೀ. ದೂರದಿಂದ ಅನೇಕ ಕೊಕ್ಕಿನಿಂದ ಕುಕ್ಕುವುದರಿಂದ ಗೋಡೆಯಲ್ಲಿ ರಂಧ್ರವುಂಟಾಗುತ್ತದೆ.  ನಿಂತುಕೊಳ್ಳಲು ಸಾಧ್ಯವಾಗುವಷ್ಟು ದೊಡ್ಡದಾದ ರಂಧ್ರವಾದ ಮೇಲೆ ಕೊರೆಯುವ ಕೆಲಸ ಇನ್ನೂ ರಭಸವಾಗಿ ಸಾಗುತ್ತದೆ.  ಬಿಲದ ಆಳ ಸುಮಾರು 10 ಸೆಂ.ಮೀ.ನಷ್ಟು ಆದಾಗ ಹಕ್ಕಿ ಬಿಲದೊಳಗಿನಿಂದ ಅಗೆಯಲು ಪ್ರಾರಂಭಿಸುತ್ತದೆ. ಅಗೆದ ಮಣ್ಣನ್ನು ತನ್ನ ಕಾಲುಗಳಿಂದ ಹೊರ ಹಾಕುತ್ತದೆ. ಈ ರೀತಿ ಸುಮಾರು 1 1/2" ಅಗಲ ಮತ್ತು 1'-6' ಉದ್ದವಿರುವ ಬಿಲಗಳನ್ನು ಕೊರೆದು ಇಂಥ ಗೂಡಿನಲ್ಲಿ ಹೆಣ್ಣುಹಕ್ಕಿ ಗುಂಡಗಿರುವ ಅಚ್ಚ ಬಿಳಿಯ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳ ಸಂಖ್ಯೆ 4-7. ಹೆಣ್ಣು ಮತ್ತು ಗಂಡು ಎರಡೂ ಜೊತೆಗೂಡಿ ಗೂಡನ್ನು ನಿರ್ಮಿಸುವುದಲ್ಲದೆ, ಮೊಟ್ಟೆಗಳಿಗೆ ಕಾವನ್ನು ಕೊಟ್ಟು ಮರಿ ಮಾಡಿ, ಮರಿಗಳಿಗೆ ಆಹಾರವನ್ನು ಸಹ ತಂದು ಒದಗಿಸುತ್ತವೆ. ಗರಿಗಳನ್ನು ಹೆಚ್ಚಾಗಿ ಅಲಂಕಾರ ವಸ್ತುವಾಗಿ ಉಪಯೋಗಿಸುತ್ತಾರೆ.

 ನೀಲಿ ಬಣ್ಣದ ಕಳ್ಳಿಪೀರ ಸುಮಾರು 8'' ಉದ್ದವಿದೆ. ಬಾಲ ಹಸಿರು ನೀಲಿಯ ಬಣ್ಣದ್ದು. ಕಣ್ಣುಗಳ ಬಳಿ ಕಪ್ಪು ಗೆರೆಗಳನ್ನು ಕಾಣಬಹುದು. ಕತ್ತಿನ ಬಳಿ ಹಳದಿ ಬಣ್ಣದ ಗುರುತಿದೆ. ಇದು ಭಾರತ. ಬರ್ಮ, ಸಿಂಹಳ ದ್ವೀಪಗಳ ನಿವಾಸಿ. ಇದರ ಸಂತಾನೋತ್ಪತ್ತಿಯ ಕಾಲ ಮಾರ್ಚಿನಿಂದ ಜೂನ್ ವರೆಗೆ. ಗೂಡು ಕಟ್ಟುವ ಕ್ರಮ ಮುಂತಾದುವೆಲ್ಲ ಹಸಿರು ಬಣ್ಣದ ಕಳ್ಳಿಪೀರದಂತೆಯೇ.

(ಕೆ.ಪಿ.ಆರ್.)

           (ಪರಿಷ್ಕರಣೆ: ಕೆ ಎಸ್ ನವೀನ್)